ಕೋಟ್‍ದಿಜಿ

	ಪಾಕಿಸ್ತಾನದಲ್ಲಿ ಖೈರ್‍ಪುರದಿಂದ 15 ಮೈಲಿ ದಕ್ಷಿಣಕ್ಕೂ ಮೊಹೆಂಜೋದಾರೋದಿಂದ 25 ಮೈಲಿ ಪಶ್ಚಿಮಕ್ಕೂ ಇರುವ ಒಂದು ಪ್ರಾಕ್ತನ ನೆಲೆ. ಇಲ್ಲಿ 1955 ಮತ್ತು 1957ರಲ್ಲಿ ನಡೆಸಿದ ಭೂಶೋಧನೆಗಳಲ್ಲಿ ಹರಪ್ಪ ಸಂಸ್ಕøತಿಯ ಅವಶೇಷಗಳು ದೊರಕಿದುವಲ್ಲದೆ ಅದಕ್ಕೂ ಹಿಂದಿನ ಮತ್ತು ಅದರ ಮೂಲವೆಂದು ಪರಿಗಣಿಸಲಾದ ಕೋಟ್‍ದಿಜಿಯನ್ ಸಂಸ್ಕøತಿಯ ಕುರುಹುಗಳು ಕಂಡುಬಂದಿವೆ. ಇಲ್ಲಿ ಕಂಡುಬಂದ ಆರು ಸ್ತರಗಳಲ್ಲಿ ಕಡೆಯ ಮೂರು ಹರಪ್ಪ ಸಂಸ್ಕøತಿಗೂ ಮೇಲಿನಿಂದ ನಾಲ್ಕನೆಯ ಸ್ತರ ಹರಪ್ಪ ಮತ್ತು ಹರಪ್ಪ-ಪೂರ್ವ ಅಥವಾ ಕೋಟ್‍ದಿಜಿಯನ್ ಸಂಸ್ಕøತಿಗೂ ಸೇರುತ್ತವೆ. ಕೋಟ್‍ದಿಜಿಯನ್ ಸಂಸ್ಕøತಿಕಾಲದಲ್ಲಿ ಕೋಟೆ ಕೊತ್ತಲಗಳಿಂದ ರಕ್ಷಿತವಾದ ವಸಾಹತುಗಳಲ್ಲಿ ಕಲ್ಲಿನ ತಳಹದಿಯ ಮೇಲೆ ಹಸಿ ಇಟ್ಟಿಗೆಗಳಿಂದ ಕಟ್ಟಿದ ಮನೆಗಳಿದ್ದುವು. ವ್ಯವಸಾಯ ಜನರ ಮುಖ್ಯ ಕಸಬಾಗಿತ್ತು. ತಾಮ್ರವಾಗಲಿ ಬೇರೆ ಯಾವ ಲೋಹವಾಗಲಿ ಬಳಕೆಯಲ್ಲಿರಲಿಲ್ಲ. ಚಾಕುಗಳು, ಬಾಣದ ಮೊನೆಗಳು ಮುಂತಾದ, ಸಿಂಧೂನದಿಯ ಬಯಲಿನಲ್ಲಿ ಹೆಚ್ಚು ಬಳಕೆಯಲ್ಲಿಲ್ಲದಿದ್ದ, ಕಲ್ಲಿನಾಯುಧಗಳು ಇಲ್ಲಿ ಉಪಯೋಗದಲ್ಲಿದ್ದುವು. ಮಣ್ಣಿನ ಪಾತ್ರೆಗಳು ಕುಂಬಾರಚಕ್ರದ ಮೇಲೆ ಮಾಡಿದಂಥವು. ಇವು ಮೇಲ್ಭಾಗದಲ್ಲಿ ಕಪ್ಪು ಬಣ್ಣದ ಪಟ್ಟಿ ಮತ್ತು ನೇರ ಅಥವಾ ಡೊಂಕು ಗೆರೆಗಳಿಂದ ಅಲಂಕೃತವಾಗಿರುತ್ತಿದ್ದುವು. ಕೊನೆಗಾಲದಲ್ಲಿ ಹರಪ್ಪ ಸಂಸ್ಕøತಿಯ ಮಡಕೆಗಳ ಅಲಂಕಾರಕ್ಕೆ ಬೇಕಾದ ಮಾದರಿಗಳೂ ಸುಟ್ಟ ಮಣ್ಣಿನ ತ್ರಿಕೋಣಾಕಾರದ ಫಲಕಗಳೂ ಬಳಕೆಗೆ ಬಂದು ಆ ಎರಡು ಸಂಸ್ಕøತಿಗಳ ಪರಸ್ಪರ ಸಂಬಂಧವನ್ನು ಸೂಚಿಸುತ್ತವೆ. ಇಂಗಾಲ-14 ಕಾಲಗಣನೆ ಪದ್ಧತಿಯ ರೀತ್ಯ ಕೋಟ್‍ದಿಜಿಯನ್ ಸಂಸ್ಕøತಿಗೆ ಕ್ರಿ.ಪೂ.2750ರಿಂದ ಕ್ರಿ.ಪೂ.1960ರ ವರೆಗೆ ಕಾಲ ನಿರ್ದೇಶ ಮಾಡಲಾಗಿದೆ. ಅನಂತರದ ಹರಪ್ಪ ಸಂಸ್ಕøತಿ ಇತರ ಪ್ರದೇಶಗಳಲ್ಲಿಯ ಆ ಸಂಸ್ಕøತಿಯಂತಿದ್ದರೂ ಹಲವಾರು ಪ್ರಾದೇಶಿಕ ಇತರ ಪ್ರದೇಶಗಳಲ್ಲಿಯ ವೈಪರೀತ್ಯಗಳನ್ನು ಒಳಗೊಂಡಿದೆ. 	 					(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ